ಪನಾಮಾ ನಾಲೆ - 
	ಪೆಸಿಫಿಕ್ ಮತ್ತು ಅಟ್ಲಾಂಟಿಕ್ ಸಾಗರಗಳ ನಡುವೆ ಉತ್ತರ ಮತ್ತು ದಕ್ಷಿಣ ಅಮೆರಿಕಗಳನ್ನು ಕೂಡಿಸುವ ಕಿರಿದಾದ ಭೂಭಾಗವನ್ನು ಕತ್ತರಿಸಿ ಮಾಡಿರುವ ನಾಲೆ. ಸೂಯಸ್ ನಾಲೆಯನ್ನು 1869ರಲ್ಲಿ ತೋಡಿ ಮುಗಿಸಿದ ಫ್ರಾನ್ಸ್ ದೇಶದ ವಿಖ್ಯಾತ ಶಿಲ್ಪಿ ಡಿ ಲೆಸೆಪ್ಸ್ 1879ರಲ್ಲಿ ಪನಾಮಾ ಭೂಕಂಠದ ಮೂಲಕ ಸಮುದ್ರಮಟ್ಟದ ನಾಲೆಯನ್ನು ಪ್ರಾರಂಭಿಸಿದ. ಉರಿಯುವ ಆ ಕಾಡು ಮತ್ತು ಚೌಗು ಭೂಮಿಯಲ್ಲಿ ಕೆಲಸಗಾರರಿಗೆ ಅನುಕೂಲತೆಗಳಿರಲಿಲ್ಲ. ಕುಡಿಯಲು ಒಳ್ಳೆಯ ನೀರೂ ಇರಲಿಲ್ಲ. ಜನಾರೋಗ್ಯದ ಏರ್ಪಾಡುಗಳೂ ಔಷದೋಪಚಾರಗಳೂ ಇಲ್ಲದ ಅವರು ಕಾಯಿಲೆಗಳಿಂದ ನರಳಿ ಅಸುನೀಗಿದರು. ನಿರ್ವಾಹವಿಲ್ಲದೆ 1889ರಲ್ಲಿ ಈ ಉದ್ಯಮವನ್ನು ನಿಲ್ಲಿಸಬೇಕಾಯಿತು. ಆದರೂ ಮತ್ತೊಂದು ಫ್ರೆಂಚ್ ಕಂಪನಿ 1894ರಲ್ಲಿ ಸಮುದ್ರಮಟ್ಟಕ್ಕಿಂತ ಎತ್ತರವಾದ ನಾಲೆಗೆ ನಕ್ಷೆಗಳನ್ನೂ ಅಂದಾಜುಗಳನ್ನೂ ಸಿದ್ಧಪಡಿಸಿತು.

	ಏತನ್ಮಧ್ಯೆ ಅಮೆರಿಕದ ಸಂಯುಕ್ತ ಸಂಸ್ಥಾನ ನಿಕರಾಗುವ ಎನ್ನುವ ಇನ್ನೊಂದು ಜಾಗದಲ್ಲಿ ನಾಲೆಯನ್ನು ತೋಡುವ ಸೂಚನೆಯನ್ನೊಡ್ಡಿ 1899ರಲ್ಲಿ ಫ್ರೆಂಚ್ ಪನಾಮಾ ಕಂಪನಿಯ ಆಸ್ತಿಗಳನ್ನೆಲ್ಲ 4 ಕೋಟಿ ಡಾಲರುಗಳನ್ನು ಕೊಟ್ಟು ಕೊಂಡಿತು. 1903ರಲ್ಲಿ ಹೊಸದಾಗಿ ಸ್ಥಾಪಿತವಾದ ಪನಾಮಾ ಪ್ರಜಾಪ್ರಭುತ್ವ ನಾಲೆಯ ವಿಚಾರದಲ್ಲಿ ಸಂಯುಕ್ತ ಸಂಸ್ಥಾನದೊಂದಿಗೆ ಕೌಲನ್ನು ಮಾಡಿಕೊಂಡ ಬಳಿಕ ಕೆಲಸಕ್ಕೆ ಅಡಚಣೆಯಾಗಿದ್ದ ತೊಡಕುಗಳೆಲ್ಲ ನಿವಾರಣೆಯಾದುವು. ಆಗ ಪನಾಮ ಜನಾರೋಗ್ಯ ರಕ್ಷಣೆ, ನಾಲೆಯ ಸಂವಿಧಾನ, ಕೆಲಸದ ವ್ಯವಸ್ಥೆ ಈ ವಿಚಾರಗಳಲ್ಲಿ ತೀರ್ಮಾನಕ್ಕೆ ಬರುವುದು ಸಾಧ್ಯವಾಯಿತು. ಸೊಳ್ಳೆಯೇ ಹಳದಿಜ್ವರ ಮತ್ತು ಮಲೇರಿಯ ಜ್ವರಕ್ಕೆ ಕಾರಣವೆಂದು ಸಂಶೋಧನೆಗಳಿಂದ ಅರಿತು ಚೌಗು ಭೂಮಿಯಲ್ಲಿ ನಿಂತ ನೀರಿನ ಮೇಲೆ ಕೊಂಚ ಎಣ್ಣೆಯನ್ನು ಬಿಟ್ಟು ಎಣ್ಣೆಯ ಪೊರೆಯನ್ನು ಹರಡಿ ಮರಿಸೊಳ್ಳೆಗಳಿಗೆ ಉಸಿರಾಡಲು ವಾಯು ದೊರೆಯದ ಹಾಗೆ ಮಾಡಿ ಕ್ರಮವಾಗಿ ಈ ಭಯಂಕರ ರೋಗಗಳನ್ನು ನಿರ್ಮೂಲ ಮಾಡಿದರು.

	ಅನಂತರ ನಾಲೆ ಸಮುದ್ರ ಮಟ್ಟದಲ್ಲಿರಬೇಕೇ, ಕೊಂಚ ಎತ್ತರವಾಗಿರಬೇಕೇ ಎಂಬ ತೊಡಕಾದ ವಿಚಾರದ ತೀರ್ಮಾನಕ್ಕಾಗಿ ಆಗ ಅಧ್ಯಕ್ಷರಾಗಿದ್ದ ಥಿಯೋಡೋರ್ ರೂಸವೆಲ್ಟ್ ಸ್ಥಾಪಿಸಿದ ಪ್ರವೀಣರ ಸಮಿತಿ ಭಿನ್ನಾಭಿಪ್ರಾಯವನ್ನು ಕೊಟ್ಟಿತು. ಅಧ್ಯಕ್ಷರು ಸಮುದ್ರದ ಮಟ್ಟಕ್ಕಿಂತಲು 26 ಮೀ. ಎತ್ತರದಲ್ಲಿ ನಾಲೆ ಹೊಗಬೇಕೆಂದು ತೀರ್ಮಾನಿಸಿದರು. ಮಟ್ಟ ಬದಲಾವಣೆಯ ಕಟ್ಟೆಗಳ ಮೂಲಕ ಒಂದು ಕಡೆ ಸಮುದ್ರಮಟ್ಟದಿಂದ ನಾಲೆಯೊಳಕ್ಕೆ ಏರುವ ಹಾಗೂ ಇನ್ನೊಂದು ಕಡೆ ಸಮುದ್ರಮಟ್ಟಕ್ಕೆ ಇಳಿಯುವ ಹಾಗೂ ಏರ್ಪಾಡು ಮಾಡಲಾಯಿತು. ಕರ್ನಲ್ ಗೋತಾಲ್ಸ್ ಎಂಬುವನನ್ನು ಮುಖ್ಯ ಎಂಜಿನಿಯರಾಗಿಯೂ ನಿಯೋಗದ ಅಧ್ಯಕ್ಷನಾಗಿಯೂ ನೇಮಿಸಿದರು. ವ್ಯಾಲೇಸ್ ಮತ್ತು ಸ್ಟೀವನ್ಸ್ ಎಂಬ ಪ್ರಖ್ಯಾತ ಶಿಲ್ಪಿಗಳ ಸಹಕಾರದಿಂದ ಈ ಕಷ್ಟಸಾಧ್ಯವಾದ ಕಾರ್ಯ ಯಶಸ್ವಿಯಾಗಿ ಮುಕ್ತಾಯವಾಯಿತು. ಈ ಭೂಕಂಠದ ಆಕಾರದ ವೈಚಿತ್ರ್ಯದಿಂದ ನಾಲೆ ಆಗ್ನೇಯ ಅಟ್ಲಾಂಟಿಕ್ ಸಾಗರದಿಂದ ಕೋಲನ್ ನಗರದಲ್ಲಿ ಪ್ರಾರಂಭವಾಗಿ ಪೆಸಿಫಿಕ್ ಸಾಗರದ ಕಡೆ ಪನಾಮಾ ನಗರದಲ್ಲಿ ಪೂರ್ವದಿಕ್ಕಿಗೆ ತಿರುಗುವುದರಿಂದ ಇಲ್ಲಿ ಸೂರ್ಯ ಪಶ್ಚಿಮ ಸಮುದ್ರವಾದ ಪೆಸಿಫಿಕ್ ಸಾಗರದಲ್ಲಿ ಉದಯಿಸುವ ಅಪೂರ್ವ ದೃಶ್ಯವನ್ನು ಕಾಣಬಹುದು.

	ಕೋಲನ್ ನಗರದ ಬಳಿ ಭೂಕಂಠ ತಗ್ಗಾಗಿದ್ದು ನಾಲೆಯ ಮೇಲೆ 56 ಕಿಮೀ. ದೂರದಲ್ಲಿ ಎರಡು ಭೂಖಂಡಗಳನ್ನೂ ಪ್ರತ್ಯೇಕಿಸುವ ನೀರ ನೆತ್ತಿಯನ್ನು ಸಮುದ್ರಮಟ್ಟದ ಮೇಲೆ 95 ಮೀ. ಎತ್ತರದಲ್ಲಿ ಮುಟ್ಟುತ್ತದೆ. ಅಲ್ಲಿಂದ ಪೆಸಿಫಿಕ್ ಸಾಗರದ ಕಡೆಗೆ ಬೇಗ ಇಳಿಯುತ್ತದೆ. ನಾಲೆ ಅಟ್ಲಾಂಟಿಕ್ ಸಾಗರದ ಕಡೆ ಕೋಲನ್ನಿನಿಂದ ಹೊರಟು ಸಮುದ್ರಮಟ್ಟದಲ್ಲಿ 11.25 ಕಿಮೀ. ದೂರ ಹೋಗಿ ಮೂರು ಮಟ್ಟ ಬದಲಾವಣೆಯ ಕಟ್ಟೆಗಳ ಮೂಲಕ ಸಮುದ್ರ ಮಟ್ಟದ ಮೇಲೆ 26 ಮೀ. ಎತ್ತರದಲ್ಲಿರುವ ಗಾಟನ್ ಸರೋವರವನ್ನು ತಲುಪುತ್ತದೆ. ಜಾಗ್ರಿಸ್ ನದಿಯ ಕಣಿವೆಯಲ್ಲಿರುವ ಈ ಕೃತಕ ಸರೋವರದಲ್ಲಿ 37 ಕಿಮೀ. ದೂರ ಹರಿದು ಖಂಡಾಂತರದ ನೀರನೆತ್ತಿಯನ್ನು ದಾಟಿ ಕ್ಯುಲೆಬ್ರ ಪರ್ವತವನ್ನು ಕತ್ತರಿಸಿಕೊಂಡು 12.9 ಕಿಮೀ ದೂರ ಹೋಗುತ್ತದೆ. ಈ ಜಾಗದಲ್ಲಿ ಕೋಟ್ಯಂತರ ಚದರ ಮೀಟರುಗಳಷ್ಟು ತೋಡು ಕೆಲಸವನ್ನು ಅಪಾರವಾದ ವೆಚ್ಚದಿಂದ ಮಾಡಬೇಕಾಯಿತು. ಸಾಲದ್ದಕ್ಕೆ ಇಂಥ ಕಡೆಗಳಲ್ಲೆಲ್ಲ ಆಗುವ ಹಾಗೆ ಎರಡು ಪಕ್ಕಗಳಲ್ಲಿಯೂ ಕಡಿದ ಗುಡ್ಡದ ತಪ್ಪಲುಗಳಿಗೆ ಆಧಾರವಿಲ್ಲದೆ ಅವು ಜರಿದು (1912) ಸುಮಾರು 125.42 ಲಕ್ಷ ಚದರ ಮೀಟರ್ ಕಲ್ಲು ಮತ್ತು ಮಣ್ಣನ್ನು ಹೆಚ್ಚಾಗಿ ತೆಗೆದು ಹಾಕಬೇಕಾಯಿತು. ಇನ್ನೂ ಕೆಳಗೆ ಕುಕ್‍ರಾಟ್ ಗುಡ್ಡ ಜರಿದು ಮತ್ತಷ್ಟು ಕಲ್ಲು ಮತ್ತು ಮಣ್ಣನ್ನು ಎತ್ತಿಹಾಕಬೇಕಾಯಿತು. ಕ್ಯಾಲೆಬ್ರ ಬೆಟ್ಟದ ತಪ್ಪಲಿನಲ್ಲಿ ಪೀಡ್ರೊ ಮೈಗೆಲ್ಲಿನಲ್ಲಿ ನಾಲೆಯ ಮಟ್ಟ ಒಂದು ಕಟ್ಡೆಯಲ್ಲಿ ಸುಮಾರು 9 ಮೀಟರುಗಳಷ್ಟು ಇಳಿಯುತ್ತದೆ. ಮುಂದೆ ಮೀರಾ ಫ್ಲೋರ್ಸ್ ಸರೋವರದಲ್ಲಿ 8 ಕಿಮೀ ದೂರ ಹಾಯ್ದು ಇನ್ನೆರಡು ಮಟ್ಟ ಬದಲಾವಣೆಯ ಕಟ್ಟೆಗಳಲ್ಲಿ 17 ಮೀಟರುಗಳಷ್ಟು ಇಳಿದು ಕೊನೆಯಲ್ಲಿ ಪೆಸಿಫಿಕ್ ಸಾಗರವನ್ನು ಸೇರುತ್ತದೆ. ಈ ಕಡೆ ಭರತದ ಏರಿಳಿತಗಳು ಹೆಚ್ಚಾದರಿಂದ ನಾಲೆಯ ಮಟ್ಟ ಕೊಂಚ ತಗ್ಗಾಗಿದೆ.

	ಈ ನಾಲೆಯ ಕೆಲಸವನ್ನು ಅಮೆರಿಕನರು 4-5-1904ರಲ್ಲಿ ಪ್ರಾರಂಭಿಸಿ 15-8-1914ರಲ್ಲಿ ಮುಗಿಸಿದರು. ಮಾರನೆಯ ವರ್ಷ ಗುಡ್ಡ ಜರಿದದ್ದರಿಂದ ಪ್ರಯಾಣಕ್ಕೆ ಆದ ಅಡ್ಡಿಯನ್ನು ಕೂಡಲೆ ನಿವಾರಿಸಿದರು. ಈ ನಾಲೆಯಲ್ಲಿ ಎಷ್ಟು ದೊಡ್ಡ ಹಡಗಾದರೂ ಹೋಗಬಹುದು. ನಾಲೆ ಪ್ರಯಾಣಕ್ಕೆ ಹಿಡಿಯುವ ಎಂಟು ಗಂಟೆಗಳ ಕಾಲದಲ್ಲಿ ಅರೆವಾಸಿ ಹೊತ್ತು ಐದು ಮಟ್ಟ ಬದಲಾವಣೆ ಕಟ್ಟೆಗಳಲ್ಲಿಯೇ ಕಳೆಯುತ್ತದೆ. ನಾಲೆ ನೇರವಾಗಿಲ್ಲ. ನೆಲದ ಮಟ್ಟವನ್ನು ಅನುಸರಿಸಿ ಬಾಗಿ ಬಳುಕಿ ಮುಂದೆ ಹೋಗುವುದು. ನಾಲೆಯ ತಳದ ಅಗಲ 61 ಮೀಟರುಗಳಿಂದ 305 ಮಿಟರುಗಳವರೆಗೂ ವ್ಯತ್ಯಾಸವಾಗುತ್ತದೆ. ಈ ನಾಲೆಯಲ್ಲಿ ಒಟ್ಟು 2006.64 ಲಕ್ಷ ಚದರ ಮೀಟರ್ ಮಣ್ಣಿನ ತೋಡುಕೆಲಸವಾಗಬೇಕಾಯಿತು. ತಗಲಿದ ಖರ್ಚು 36.6 ಕೋಟಿ ಡಾಲರುಗಳು. ನಾಲೆ ಸಂಯುಕ್ತ ಸಂಸ್ಥಾನಕ್ಕೆ ಸೇರಿದ್ದರೂ ಎಲ್ಲ ದೇಶಗಳ ಹಡಗುಗಳೂ ಮಾಮೂಲಾದ ಬಾಡಿಗೆಯನ್ನು ಕೊಟ್ಟು ಅದನ್ನು ಉಪಯೋಗಿಸಕೊಳ್ಳಬಹುದು.

I	ಹಿಂದೆ ಸೂಯಸ್ ನಾಲೆಯ ಶಿಲ್ಪಿ ಡಿ ಲೆಸೆಪ್ಸ್ ಈ ನಾಲೆ ಸಮುದ್ರಮಟ್ಟದಲ್ಲಿ ಹೋಗಬೇಕೆಂದು ವಾದಿಸಿದ್ದನಷ್ಟೆ. ಆದರೆ ಖರ್ಚು ಹೆಚ್ಚಾಗುವುದೆಂದು ಮಟ್ಟ ಬದಲಾವಣೆಯ ಕಟ್ಟೆಗಳನ್ನು ಕಟ್ಟಿದರು. ಎರಡನೆಯ ಮಹಾಯುದ್ಧದ ಅನುಭವದಿಂದ ಈಗ ಸಂಯುಕ್ತ ಸಂಸ್ಥಾನದ ನಾಲೆಯ ಅಧಿಕಾರಿಗಳಿಂದ ಮತ್ತೆ ನಾಲೆಯನ್ನು ಸಮುದ್ರ ಮಟ್ಟಕ್ಕೆ ಇಳಿಸಬೇಕೆಂದು ಒತ್ತಾಯ ಬರುತ್ತಿದೆ.
(ಎಚ್.ಸಿ.ಕೆ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ